ವಿದ್ಯುತ್ ಸ್ಪರ್ಶದಿಂದ ಭಸ್ಮವಾಯ್ತು ರೈತರ ಬೆವರಿನ ಬೆಳೆ: 25 ಎಕರೆ ಕಬ್ಬು ನಾಶ, ಸೂಕ್ತ ಪರಿಹಾರಕ್ಕೆ ಒತ್ತಾಯ.

ಭಾರತ ಟೈಮ್ಸ್ ಸುದ್ದಿ: ಬೆಳಗಾವಿ ಜಿಲ್ಲೆ:ಖಾನಾಪುರ ತಾಲೂಕಿನ ಕಾನ್ಸುಲಿ ಗ್ರಾಮದಲ್ಲಿ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸುಮಾರು 25 ಎಕರೆ ಕಬ್ಬಿನ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ದಾರುಣ ಘಟನೆ ಸಂಭವಿಸಿದೆ.
ಗ್ರಾಮದ ರೈತರಾದ ರಾಮು ಅಪುನಿ ಕಾಲ್ಮನಕರ್, ಮಾರುತಿ ಬರಮಾನಿ ಗೌರವ,ನಾಗರಾಜ ಕಾಳು ಮೋಟಿಚೆ ಅವರಿಗೆ ಸೇರಿದ ಹೊಲಗಳಲ್ಲಿ ಈ ದುರಂತ ಸಂಭವಿಸಿದೆ. ಹಗಲಿರುಳು ಬೆವರು ಹರಿಸಿ ಬೆಳೆಸಿದ್ದ ಕಬ್ಬಿನ ಬೆಳೆ ಕಣ್ಣೆದುರೇ ಬೆಂಕಿಯ ಕೆನ್ನಾಲಕೆಗೆ ಸಿಲುಕಿ ನಾಶವಾಗಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ಹೆಸ್ಕಾಂ ನಿರ್ಲಕ್ಷ್ಯವೇ ಕಾರಣ:ವಿದ್ಯುತ್ ಇಲಾಖೆಯ (ಹೆಸ್ಕಾಂ) ಘೋರ ನಿರ್ಲಕ್ಷ್ಯ ಹಾಗೂ ವಿದ್ಯುತ್ ತಂತಿಗಳ ಶಾರ್ಟ್ ಸರ್ಕ್ಯೂಟ್‌ನಿಂದಲೇ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಸಂತ್ರಸ್ತ ರೈತರು ಗಂಭೀರವಾಗಿ ಆರೋಪಿಸಿದ್ದಾರೆ. ಸರಿಯಾದ ನಿರ್ವಹಣೆ ಇಲ್ಲದೆ ಲೈನ್‌ನಲ್ಲಿ ಉಂಟಾದ ಸ್ಪಾರ್ಕ್‌ನಿಂದ ಬೆಂಕಿ ಹೊತ್ತಿಕೊಂಡು ಇಡೀ ಕಬ್ಬಿನ ಗದ್ದೆಗೆ ಹರಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಕ್ಷಣವೇ ಪರಿಹಾರ ನೀಡಲು ಒತ್ತಾಯ:
ಘಟನೆಯಿಂದ ಕಂಗಾಲಾಗಿರುವ ಸ್ಥಳೀಯ ರೈತರು ವಿದ್ಯುತ್ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಂಬಂಧಪಟ್ಟ ವಿದ್ಯುತ್ ಇಲಾಖೆಯ (HESCOM) ಹಿರಿಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶಾರ್ಟ್ ಸರ್ಕ್ಯೂಟ್‌ನಿಂದಾದ ಈ ಬೆಳೆ ನಷ್ಟವನ್ನು ಅಂದಾಜಿಸಿ, ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣವೇ ಸೂಕ್ತ ಪರಿಹಾರ ಒದಗಿಸಬೇಕು” ಎಂದು ಗ್ರಾಮಸ್ಥರು ಮತ್ತು ರೈತರು ಪಟ್ಟು ಹಿಡಿದು ಆಗ್ರಹಿಸಿದ್ದಾರೆ.


