ಸತತ 7ನೇ ವರ್ಷ ಸಮಾಜಮುಖಿ ಆಚರಣೆ: 155ಕ್ಕೂ ಹೆಚ್ಚು ಅನಾಥರಿಗೆ ಸೇವೆ ಸಲ್ಲಿಸಲಿರುವ ಮಲ್ಲಿಕಾರ್ಜುನ ಹಡಪದ ಸುಗೂರ

ಭಾರತ ಟೈಮ್ಸ್ ಸುದ್ದಿ :ಕಲಬುರಗಿ:
ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಪೂಜ್ಯ ಶ್ರೀ ಷ.ಬ್ರ. ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ 62ನೇ ವರ್ಷದ ಜನ್ಮದಿನದ ನಿಮಿತ್ತವಾಗಿ ಕಲಬುರಗಿಯಲ್ಲಿ ಅರ್ಥಪೂರ್ಣ ಸಮಾಜಮುಖಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀಗಳ ಹುಟ್ಟುಹಬ್ಬವನ್ನು ಕಳೆದ 7 ವರ್ಷಗಳಿಂದ ವಿಭಿನ್ನ ಹಾಗೂ ಸಮಾಜಮುಖಿಯಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯೂ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ನಿಸ್ವಾರ್ಥ ಸಮಾಜ ಸೇವಕರಾದ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಅವರು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಈ ಪ್ರಯುಕ್ತ ಅಕ್ಟೋಬರ್ 20ರ ಮಂಗಳವಾರದಂದು ಕಲಬುರಗಿಯ ಬಿದ್ದಾಪುರ ಕಾಲೋನಿಯಲ್ಲಿರುವ ಅನಾಥ ನಿರ್ಗತಿಕರ ಕೇಂದ್ರದಲ್ಲಿ ನೆಲೆಸಿರುವ 155ಕ್ಕೂ ಹೆಚ್ಚು ಮಾನಸಿಕ ಬುದ್ಧಿಮಾಂದ್ಯರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಲಾಗುವುದು. ಈ ಪುಣ್ಯಕಾರ್ಯದಲ್ಲಿ ಹಡಪದ ಅಪ್ಪಣ್ಣ ಸಮಾಜದ ಕಾಯಕ ಬಂಧುಗಳು ಹಾಗೂ ನಿಸ್ವಾರ್ಥ ಸೇವಕರು ಭಾಗವಹಿಸಲಿದ್ದಾರೆ.
“ಕಾಯಕವೇ ಕೈಲಾಸ – ಸೇವೆಯೇ ನಮ್ಮ ಧರ್ಮ” ಎಂಬ ತತ್ವದಡಿ ಆಯೋಜಿಸಲಾಗಿರುವ ಈ ಸಮಾಜಮುಖಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸೇವಾ ಕಾರ್ಯಕ್ಕೆ ಕೈಜೋಡಿಸಬೇಕಾಗಿ ವಿನಂತಿಸಲಾಗಿದೆ.


