ಕಾಂಗ್ರೆಸ್ ಅಧ್ಯಕ್ಷರ ನಿಂದನೀಯ ಹೇಳಿಕೆ ಖಂಡನೀಯ: ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆಗೆ ಸಂಸದ ಜಗದೀಶ ಶೆಟ್ಟರ್ ಆಗ್ರಹ

ಭಾರತ ಟೈಮ್ಸ್ ಸುದ್ದಿ :ಬೆಳಗಾವಿ:ಬಿಹಾರದ ಪಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ತಂದೆಯವರ ಕುರಿತು ಅತ್ಯಂತ ಕೆಳಮಟ್ಟದ ಮತ್ತು ನಿಂದನೀಯ ಭಾಷೆ ಬಳಸಿರುವುದಕ್ಕೆ ಸಂಸದರಾದ ಶ್ರೀ ಜಗದೀಶ ಶೆಟ್ಟರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡವಳಿಕೆಯು ಕಾಂಗ್ರೆಸ್ ಪಕ್ಷದ ರಾಜಕೀಯ ದಿವಾಳಿತನ ಹಾಗೂ ಸಾರ್ವಜನಿಕ ಶಿಷ್ಟಾಚಾರದ ಬಹಿರಂಗ ಉಲ್ಲಂಘನೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಬಿಹಾರದ ಮೊದಲ ಮುಖ್ಯಮಂತ್ರಿ ಡಾ. ಕೃಷ್ಣ ಸಿಂಗ್ ಅವರ ಜಯಂತಿ ಆಚರಣೆಯಂತಹ ಜವಾಬ್ದಾರಿಯುತ ವೇದಿಕೆಯಿಂದ ಇಂತಹ ಕೀಳು ಮತ್ತು ಅಸಹನೀಯ ಭಾಷೆ ಬಳಸಿರುವುದು ಕಾಂಗ್ರೆಸ್ ನಾಯಕತ್ವದಲ್ಲಿ ಆವರಿಸಿರುವ ತೀವ್ರ ಹತಾಶೆ ಮತ್ತು ನೈತಿಕ ಅಧಃಪತನವನ್ನು ಎತ್ತಿಹಿಡಿಯುತ್ತದೆ,” ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಆಡಳಿತ, ಅಭಿವೃದ್ಧಿ ಹಾದಿ ಮತ್ತು ದೇಶದ 140 ಕೋಟಿ ಜನರು ಅವರ ಮೇಲಿಟ್ಟಿರುವ ಅಚಲ ನಂಬಿಕೆಯನ್ನು ಪ್ರಜಾಸತ್ತಾತ್ಮಕವಾಗಿ ಎದುರಿಸಲು ಸಾಧ್ಯವಾಗದೇ ಕಾಂಗ್ರೆಸ್ ನಾಯಕರು ಪದೇ ಪದೇ ವೈಯಕ್ತಿಕ ನಿಂದನೆಗೆ ಇಳಿಯುತ್ತಿದ್ದಾರೆ. ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸ್ವಾಗತಿಸಬಹುದು, ಆದರೆ ರಾಜಕೀಯ ಲಾಭಕ್ಕಾಗಿ ತಂದೆ-ತಾಯಿಯರ ಹಂತದಲ್ಲಿ ನಿಂದಿಸುವುದು ಸಂಪೂರ್ಣವಾಗಿ ಕ್ಷಮಿಸಲಾರದ ಅಪರಾಧ ಎಂದು ಅವರು ಆಕ್ಷೇಪಿಸಿದರು.
ಕಾಂಗ್ರೆಸ್ ನಾಯಕರ ಈ ಅಹಂಕಾರ ಮತ್ತು ಕೆಳಮಟ್ಟದ ರಾಜಕೀಯವನ್ನು ಭಾರತದ ಜನತೆ ಖಂಡಿತವಾಗಿಯೂ ತಿರಸ್ಕರಿಸಲಿದ್ದಾರೆ. ನಾಗರಿಕ ಸಮಾಜವು ಒಮ್ಮತದಿಂದ ಈ ನಿಂದನೀಯ ನಡವಳಿಕೆಯನ್ನು ಖಂಡಿಸಬೇಕು ಹಾಗೂ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಹೇಳಿಕೆಗೆ ತಕ್ಷಣವೇ ದೇಶದ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಆಗ್ರಹಿಸಿದ್ದಾರೆ.


