ಬೆಳಗಾವಿ-ಧಾರವಾಡ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: ರಾಂಗ್ ಸೈಡ್ನಲ್ಲಿ ಬಂದ ಬೈಕ್ ಸವಾರ ಸಾವು

ಭಾರತ ಟೈಮ್ಸ್ ಸುದ್ದಿ :ಕಿತ್ತೂರು: ಅತೀವೇಗ ಮತ್ತು ನಿರ್ಲಕ್ಷ್ಯದಿಂದ ರಾಂಗ್ ಸೈಡ್ನಲ್ಲಿ ಬಂದ ಮೋಟಾರ್ ಸೈಕಲ್ ಸವಾರನೊಬ್ಬ ಕಾರಿಗೆ ಡಿಕ್ಕಿಹೊಡೆದು ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ದಾರುಣ ಘಟನೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಘಟಗಿ ತಾಲೂಕಿನ ಜುಂಜನಬೈಲ ಗ್ರಾಮದ ನಿವಾಸಿ ಶಿವಾಜಿ ಸಾತಪ್ಪ ಸೀಮನ್ನವರ (28) ಮೃತ ದುರ್ದೈವಿ.
ದಿನಾಂಕ 14/10/2026 ರಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ದೂರುದಾರರಾದ ರಶೀದಖಾನ್ ಅಬ್ಬಾಸಖಾನ್ ಖಾನಜಾದೆ ಹಾಗೂ ಪ್ರವೀಣ ಯಶವಂತ ದೇಸಾಯಿ ಅವರು ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ (ನಂಬರ್: ಎಮ್.ಎಚ್-01 ಇವಿ-9005) ಬೆಳಗಾವಿಯಿಂದ ಹುಬ್ಬಳ್ಳಿಗೆ ಹೊರಟಿದ್ದರು. ಪ್ರವೀಣ್ ಅವರ ಸಂಬಂಧಿಕರಾದ ಉದಯಸಿಂಗ್ ಜಯಸಿಂಗ್ ಘಾಟಗೆ ಕಾರು ಚಾಯಿಸುತ್ತಿದ್ದರು. ಮಧ್ಯಾಹ್ನ 2:00 ಗಂಟೆಯ ಸಮಯದಲ್ಲಿ ಬೆಳಗಾವಿ-ಧಾರವಾಡ ಎನ್.ಎಚ್-48 ಹೈವೇ ರಸ್ತೆಯ ಕಾದ್ರೋಳ್ಳಿ ಗ್ರಾಮದ ಹದ್ದಿನ ನವತಾರ ಹೊಟೆಲ್ ಹತ್ತಿರ ಬರುತ್ತಿದ್ದಾಗ, ಎದುರುಗಡೆಯಿಂದ ಅಂದರೆ ಧಾರವಾಡ ಕಡೆಯಿಂದ ಬೆಳಗಾವಿ ಕಡೆಗೆ ಕೆಎ-25-ಹೆಚ್.ಪಿ-2523 ನೇ ನಂಬರಿನ ಮೋಟಾರ್ ಸೈಕಲ್ ಅನ್ನು ಸವಾರ ಶಿವಾಜಿ ಸಾತಪ್ಪ ಸೀಮನ್ನವರ ಅತೀವೇಗ ಹಾಗೂ ನಿಷ್ಕಾಳಜಿಯಿಂದ ರಾಂಗ್ ಸೈಡ್ನಲ್ಲಿ ಚಾಯಿಸಿಕೊಂಡು ಬಂದು ಕಾರಿನ ಎಡಬದಿಗೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ತೀವ್ರತೆಗೆ ಮೋಟಾರ್ ಸೈಕಲ್ ಸವಾರ ಶಿವಾಜಿ ಅವರ ತಲೆಗೆ ಹಾಗೂ ಎಡಗಾಲಿಗೆ ಗಂಭೀರ ಸ್ವರೂಪದ ಪೆಟ್ಟಾಗಿದ್ದು, ಕೂಡಲೇ ಹೈವೇ ಆಂಬುಲೆನ್ಸ್ ಸಹಾಯದಿಂದ ಹೆಚ್ಚಿನ ಉಪಚಾರಕ್ಕಾಗಿ ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಆದರೆ, ದುರ್ದೈವವಶಾತ್ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶಿವಾಜಿ ಸಾತಪ್ಪ ಸೀಮನ್ನವರ ಅವರು ಚಿಕಿತ್ಸೆ ಫಲಿಸದೆ ಅದೇ ದಿನ ರಾತ್ರಿ 1910 ಗಂಟೆಗೆ ಮೃತಪಟ್ಟಿರುವುದಾಗಿ ಆಸ್ಪತ್ರೆಯಿಂದ ಇ-ಮೇಲ್ ಮೂಲಕ ಪೊಲೀಸ್ ಠಾಣೆಗೆ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 245/2026 ಕಲಂ: 281, 106(1), ಬಿ.ಎನ್.ಎಸ್.-2025 ರ ಅಡಿಯಲ್ಲಿ ಪ್ರಕರಣವನ್ನು ಬದಲಾಯಿಸಿ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.


